ಇಲ್ಲ ಹುಡುಕಿ

Sunday, 7 August 2011

ಸಂಸ್ಕೃತ ಎಂದರೇನು? ಅದು ಹೇಗೆ ಬೆಳೆದು ಬಂತು?

ವಕ್ರತುಂಡ ಮಹಾಕಾಯ
ಕೋಟಿ ಸೂರ್ಯ ಸಮಪ್ರಭ।
ನಿರ್ವಿಘ್ನಂ ಕುರು ಮೇ ದೇವ
ಸರ್ವಕಾರ್ಯೇಷು ಸರ್ವದಾ॥

ಹೇ ಗಣಪತಿ ಮಹಾಕಾಯನೆ, ಆನೆಯ ಮುಖವುಳ್ಳವನೆ,
ಕೋಟಿ ಸೂರ್ಯರಷ್ಟು ಕಾಂತಿಯುಳ್ಳವನೆ ಎಲ್ಲಾ ಕಾರ್ಯಗಳಲ್ಲಿ ಯಾವಾಗಲೂ ತೊಂದರೆಗಳು ಬರದಂತೆ ಮಾಡು.


ಭಾರತ ದೇಶದಲ್ಲಿ ಹಲವಾರು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಸುಮಾರು ೫-೬ ಸಾವಿರ ವರ್ಷಗಳಿಂದ ಸಂಸ್ಕೃತ ಭಾಷೆಯು ಅತ್ಯಂತ ಪ್ರಸಿದ್ಧವಾಗಿದೆ. ರಾಮಾಯಣ, ಮಹಾಭಾರತ, ಪುರಾಣಗಳು, ಉಪನಿಷತ್ತುಗಳು, ಕಾವ್ಯಗಳು ಮತ್ತು ನಾಟಕಗಳು ಸಂಸ್ಕೃತ ಭಾಷೆಯಲ್ಲಿವೆ. ವೇದ, ಉಪನಿಷತ್ ಕಾಲದಿಂದ ಆರಂಭಿಸಿ ಭಾರತೀಯ ಸಂಸ್ಕೃತಿಯನ್ನು ನಾವು ಈ ಭಾಷೆಯಲ್ಲಿ ಕಾಣಬಹುದು.
ಹಿಂದೆ ಈ ಭಾಷೆಯು ಆಡುಭಾಷೆಯಾಗಿತ್ತು. ಈಗಲೂ ಮಾತನಾಡುವ ಜನರಿದ್ದಾರೆ. ವಿಶ್ವದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ, ಸಂಶೋಧನೆಗಳು, ನಡೆಯುತ್ತಿದೆ. ಆಯುರ್ವೇದ, ಯೋಗ, ವ್ಯಾಕರಣ, ಜ್ಯೋತಿಷ, ವ್ಯವಹಾರಶಾಸ್ತ್ರ, ಅರ್ಥಶಾಸ್ತ್ರ, ಧರ್ಮಶಾಸ್ತ್ರಗಳಿಂದ ಸಂಸ್ಕೃತ ಭಾಷೆ ಸಮೃದ್ಧವಾಗಿದೆ. ಅಲ್ಲದೇ ಭಾರತೀಯ ಭಾಷೆಗಳ ಮೇಲೆ ಹಾಲಿನಲ್ಲಿ ನೀರು ಬೆರೆತಂತೆ ಸಂಸ್ಕೃತದ ಪ್ರಭಾವ ಯಥೇಚ್ಛವಾಗಿದೆ.
ಸಂಸ್ಕೃತ ಭಾಷೆಯಲ್ಲಿ ಉತ್ತಮವಾದ ವ್ಯಾಕರಣವನ್ನು ಪಾಣಿನಿ, ಪತಂಜಲಿ, ವರರುಚಿ ಮುಂತಾದವರು ರಚಿಸಿ ಇಡೀ ಜಗತ್ತಿನಲ್ಲಿ ಒಂದೇ ರೀತಿ ಭಾಷೆ ಇರುವಂತೆ ಮಾಡಿದ್ದಾರೆ, ಜಗತ್ತಿನ ಹಲವಾರು ಭಾಷೆಗಳಿಗೆ ಉಪಕಾರ ಮಾಡಿರುವ ಈ ಭಾಷೆ ಅಪಾರ ಶಬ್ದ ಸಂಪತ್ತಿನಿಂದ ಕೂಡಿದೆ, ಪ್ರಾಚೀನ ನಾಗರಿಕತೆ, ಪರಂಪರೆಗಳನ್ನು ನಮಗೆ ತಿಳಿಸುವುದು ಸಂಸ್ಕೃತ ಭಾಷೆ ಮಾತ್ರ. ಆನಂತರ ಬಂದ ಅನುವಾದಗಳನ್ನು ಎಷ್ಟೇ ಓದಿದರೂ ಅದು ಮೂಲಭಾಷೆಯನ್ನು ತಿಳಿದಂತಾಗುವುದಿಲ್ಲ.
ಈ ಭಾಷೆಯನ್ನು ಸುರಭಾರತಿ, ದೇವವಾಣಿ, ಗೀರ್ವಾಣ ಭಾಷೆ, ದೇವಭಾಷೆ ಎಂದು ಹಲವಾರು ಹೆಸರಿನಿಂದ ಗುರುತಿಸುತ್ತಾರೆ.
ಈ ಭಾಷೆಯ ಸರ್ವಮಾನ್ಯ ಪ್ರಮುಖ ವ್ಯಾಕರಣಕಾರ 'ಪಾಣಿನಿ'. ಈತ ಕ್ರಿ.ಪೂರ್ವ ಸುಮಾರು ೪೦೦ ರಲ್ಲಿಬದುಕಿದ್ದಿರಬಹುದೆಂಬುವುದು ವಿದ್ವಾಂಸರ ಅಭಿಪ್ರಾಯ. ಸಂಸ್ಕೃತ ವರ್ಣಮಾಲೆಗೆ ಸಾಕ್ಷತ್ ಪರಮೇಶ್ವರನೇ ಕಾರಣನೆಂಬುವುದು ಪಾಣಿನಿಯ ಮತ್ತು ಭಾರತೀಯ ಪರಂಪರೆಯ ಅಭಿಮತ. ವರ್ಣಮಾಲೆಯ ಸೃಷ್ಟಿ ಹೇಗೆ ಆಗಿದೆ ಎಂಬುವುದನ್ನು ಮುಂದಿನ ಭಾಗದಲ್ಲಿ ಸವಿವರವಾಗಿ ವಿವರಿಸುತ್ತೇನೆ.

No comments:

Post a Comment